ವರದಾಚಾರ್ಯ, ಎ ವಿ
 	1869-1926. ಸುಪ್ರಸಿದ್ಧ ರಂಗಭೂಮಿ ನಟ. 1869 ಫೆಬ್ರವರಿ 2 ರಂದು ಜನಿಸಿದರು. ಇವರ ತಂದೆ ಅನುಮನಪಲ್ಲಿ ರಂಗಸ್ವಾಮಿ ಅಯ್ಯಂಗಾರ್ಯರು ರೆವಿನ್ಯೂ ಇಲಾಖೆಯಲ್ಲಿ ಶಿರಸ್ತೇದಾರರಾಗಿದ್ದರು. ಎಳಮೆಯಲ್ಲಿಯೇ ವರದಾಚಾರ್ಯರು ಸಂಗೀತ ಅಭಿನಯ ಕಲೆಗಳಲ್ಲಿ ಅತೀವ ಆಸಕ್ತಿ ವಹಿಸಿದ್ದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಓದಿ ಎಫ್.ಎ. ಪರೀಕ್ಷೆಯಲ್ಲಿ ತೇರ್ಗಡೆಯಾದ ಅನಂತರ, ತಮ್ಮ ಮನೋಹರವಾದ ರೂಪ. ದೇಹದಾಢ್ರ್ಯ ಹಾಗೂ ಸೊಂಪಾದ ಶಾರೀರದಿಂದಾಗಿ ಕಲಾವಿಲಾಸೀ ತಂಡಗಳ ಗಮನ ಸೆಳೆದು ಪಾತ್ರವಹಿಸತೊಡಗಿದರು. ಇವರು ನಾಯಕ ಭೂಮಿಕೆಯಲ್ಲಿ ನಿಂತ ಮೊದಲ ನಾಟಕ ವಿಕ್ರಮೋರ್ವಶೀಯ. ಅನಂತರ 1892ರಲ್ಲಿ ಮೈಸೂರಿ ನಲ್ಲಿದ್ದ ಗೌರೀನರಸಿಂಹಯ್ಯನವರ ಶ್ರೀಸರಸ್ವತೀ ವಿಲಾಸ ರತ್ನಾವಳೀ ನಾಟಕ ಸಭಾಮಂಡಲಿಯನ್ನು ಸೇರಿ ಪ್ರಚಲಿತ ಪೌರಾಣಿಕ ನಾಟಕಗಳಲ್ಲಿ ನಾಯಕ ಪಾತ್ರಗಳನ್ನು ನಿರ್ವಹಿಸ ತೊಡಗಿದರು. ಆ ಮಂಡಳಿ ನಿಂತ ಅನಂತರ 1896ರಲ್ಲಿ ಬೆಂಗಳೂರಿಗೆ ಹಿಂದಿರುಗಿ ಬ್ರಿಟಿಷ್ ರೆಸಿಡೆಂಟರ ಕಛೇರಿಯಲ್ಲಿ ನೌಕರಿ ಹಿಡಿದರು. ಆದರೆ ರಂಗದ ಗೀಳು ಇವರನ್ನು ಮತ್ತೆ ಸೆಳೆಯಿತು. ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೆಂಗಳೂರು ಯೂನಿಯನ್ ಕ್ಲಬ್ ಸಂಘವನ್ನು ಸೇರಿದರು. ಅಷ್ಟರಲ್ಲಿ ಪ್ಲೇಗು ರೋಗದಿಂದ ಹೆಂಡತಿ ಮತ್ತು ಇದ್ದ ಒಬ್ಬನೇ ಮಗ ತೀರಿಕೊಂಡರು. ಈ ಸಾಂಸಾರಿಕ ಕ್ಲೇಶದಿಂದ ಬಳಲುತ್ತಿದ್ದ ಇವರು ಅಭಿಮಾನಿಗಳ ಒತ್ತಾಸೆಯಿಂದ ಮತ್ತೆ ಮೈಸೂರಿಗೆ ಮರಳಿ, ಗೌರೀನರಸಿಂಹಯ್ಯನವರ ಮರಣದಿಂದ ಮುಂದುಗಾಣದಂತಾಗಿದ್ದ ರತ್ನಾವಳಿ ನಾಟಕ ಸಭಾ ಮಂಡಳಿಯ ಮೇಲ್ವಿಚಾರಣೆ ವಹಿಸಿಕೊಂಡು, ಅದನ್ನು ಸ್ವಲ್ಪ ಕಾಲ ನಡೆಯಿಸಿ, ಹಿತೈಷಿಗಳ ಒತ್ತಾಯದಿಂದ 1902ರಲ್ಲಿ ಮಂಡಳಿಯನ್ನು ಸ್ವಂತ ಆಡಳಿತಕ್ಕೆ ತೆಗೆದುಕೊಂಡು ಮೈಸೂರು ರತ್ನಾವಳೀ ಥಿಯೇಟ್ರಿಕಲ್ ಕಂಪನಿ ಎಂಬ ಹೆಸರಿನಿಂದ ಸುಮಾರು ಇಪ್ಪತ್ತು ವರ್ಷಗಳ ಕಾಲ ನಡೆಸಿ ಮೈಸೂರು ವೃತ್ತಿರಂಗಭೂಮಿಯ ಸಾಮ್ರಾಟ ನಟರೆನಿಸಿಕೊಂಡರು. ಇವರ ಆ ಕಾಲ ಕನ್ನಡ ರಂಗಭೂಮಿಯ ಸ್ವರ್ಣಯುಗವೆಂದೇ ಗುರುತುಗೊಂಡಿತು. 

	ಇವರು ನಾಯಕ ನಟರು; ಅಷ್ಟೇ ಪ್ರಭಾವಶಾಲೀ ಗಾಯಕ ನಟರೂ ನಾಟಕಕಾರರೂ ಆಗಿದ್ದರು. ಶಾಕುಂತಲ, ರತ್ನಾವಳೀ, ಮನ್ಮಥವಿಜಯ, ಹರಿಶ್ಚಂದ್ರ, ಮಂದಾರವಲ್ಲೀ ಪರಿಣಯ, ಮಾಲವಿಕಾಗ್ನಿಮಿತ್ರ, ನಿರುಪಮ, ರಾಮವರ್ಮ-ಲೀಲಾವತಿ, ಪ್ರತಾಪಸಿಂಹ, ಸದಾರಮೆ, ಮಕರಂಧಿ ಕಾಪರಿಣಯ, ಭಕ್ತಪ್ರಹ್ಲಾದ, ವಿಷ್ಣುಲೀಲೆ ಹಾಗೂ ತಾವೇ ಬರೆದ ಇಂದಿರಾನಂದ ಮತ್ತು ವಿಮಲಾವಿಜಯ ನಾಟಕಗಳಲ್ಲಿ ಇವರು ನಿರ್ವಹಿಸಿದ ನಾಯಕ ಪಾತ್ರಗಳು ವೈಯಕ್ತಿಕವಾಗಿ ಇವರಿಗೂ ಇವರ ಪರಿಣತ ನಟಮಂಡಳಿಗೂ ದಕ್ಷಿಣ ಭಾರತದಲ್ಲಿ ಅಪೂರ್ವವಾದ ಕೀರ್ತಿಯಶಸ್ಸು ಗಳನ್ನು ತಂದುಕೊಟ್ಟವು. ಇವರು ನಿರ್ವಹಿಸಿದ ದುಷ್ಯಂತ (ಶಾಕುಂತಲ ನಾಟಕದಲ್ಲಿ), ಹಿರಣ್ಯಕಶಿಪು (ಭಕ್ತಪ್ರಹ್ಲಾದ ನಾಟಕದಲ್ಲಿ), ಸಂತಾಪಕ (ನಿರುಪಮ ನಾಟಕದಲ್ಲಿ), ವಸಂತ (ರತ್ನಾವಲಿ ನಾಟಕದಲ್ಲಿ), ರಾಮವರ್ಮ (ರಾಮವರ್ಮ-ಲೀಲಾವತಿ ನಾಟಕದಲ್ಲಿ) ಈ ಮುಂತಾದ ಪಾತ್ರಗಳ ವೈಭವವನ್ನು ನೋಡಿದ ಜನ ಮರೆಯದಾದರು. ಮೈಸೂರಿನಲ್ಲಿ 1919ರಲ್ಲಿ ಇವರು ಪ್ರದರ್ಶಿಸಿದ ಪ್ರಹ್ಲಾದಚರಿತ್ರೆ ನಾಟಕದಲ್ಲಿ ಇವರ ಅಭಿನಯವನ್ನು ರವೀಂದ್ರನಾಥ ಠಾಕೂರರು ನೋಡಿ ಬಹುವಾಗಿ ಮೆಚ್ಚಿಕೊಂಡರು. 

	ಮೈಸೂರಿನ ವೃತ್ತಿರಂಗಭೂಮಿಗೆ ಇವರ ಕೊಡುಗೆ ದೊಡ್ಡಮಟ್ಟದ್ದು. ರಂಗಪ್ರದರ್ಶನದ ವೈಭವವನ್ನು ಹಿಗ್ಗಿಸಿ, ಕರ್ನಾಟಕ ಶಾಸ್ತ್ರೀಯ ಸಂಗೀತ ರಾಗಗಳಿಗೆ ಗಮಕದ ಮೆರಗು ಕೊಟ್ಟು ರಂಗಸಂಗೀತದ ಹೊಸದೊಂದು ಪರಂಪರೆಯನ್ನೇ ರೂಪಿಸಿ, ಪಾತ್ರದ ವೇಷಭೂಷಣಗಳಿಗೆ ಸಹಜತೆ, ಠೀವಿ, ಅಭಿನಯವನ್ನೂ ಹಾಸ್ಯವನ್ನೂ ಪರಿಷ್ಕಾರಗೊಳಿಸಿದ ಕೀರ್ತಿ ಇವರದು. ಇವರ ಅಭಿನಯ ಕೌಶಲವನ್ನೂ ಕನ್ನಡ ರಂಗಭೂಮಿಯ ಮುನ್ನಡೆಗಾಗಿ ಇವರು ಸಲ್ಲಿಸಿದ ಸೇವೆಯನ್ನೂ ಮೆಚ್ಚಿಕೊಂಡ ಮೈಸೂರು ಜನತೆ 1913ರಲ್ಲಿ ಇವರಿಗೆ ಗಿಫ್ಟೆಡ್ ಆಕ್ಟರ್ (ವರನಟ) ಎಂಬ ಪ್ರಶಸ್ತಿಯನ್ನೂ ಉಡುಪಿ ಅಷ್ಟಮಠಾಧೀಶರು ನಾಟ್ಯಕಲಾಚತುರ ಎಂಬ ಪ್ರಶಸ್ತಿಯನ್ನೂ ಕೊಟ್ಟು ಗೌರವ ತೋರಿದರು. 1918ರಲ್ಲಿ ತಿರುಚ್ಚಿರಾಪ್ಪಳ್ಳಿಯ ಜನತೆ ಅನಿಬೆಸೆಂಟರ ನೇತೃತ್ವದಲ್ಲಿ ಇವರಿಗೆ ನಾಟಕಶಿರೋಮಣಿ ಎಂಬ ಪ್ರಶಸ್ತಿಯನ್ನು ಕೊಟ್ಟು ಸತ್ಕರಿಸಿತು. ಉದಾರಸ್ವಭಾವದವರಾಗಿದ್ದ ಇವರು ತಮ್ಮ ಸಂಪಾದನೆಯ ಬಹುಭಾಗವನ್ನು ಕಷ್ಟಸ್ಥಿತಿಯಲ್ಲಿರುತ್ತಿದ್ದ ನಾನಾ ವರ್ಗದ ಜನತೆಗೆ ಧಾರಾಳವಾಗಿ ಹಂಚಿ ಕೊಡುಗೈದೊರೆ ಎಂದು ಹೆಸರಾಗಿದ್ದರು. ಇವರ ಈ ಧಾರಾಳಸ್ವಭಾವದಿಂದಾಗಿ ಜೀವನದ ಕೊನೆಯ ದಿನಗಳಲ್ಲಿ ಆರ್ಥಿಕವಾಗಿ ಬಹುವಾಗಿ ಬಳಲಿ 1926 ಏಪ್ರಿಲ್ 4 ರಂದು ಬೆಂಗಳೂರಿನಲ್ಲಿ ತೀರಿಕೊಂಡರು. ಇವರು ಸ್ಥಾಪಿಸಿದ ನಾಟಕ ಮಂಡಳಿ ಟಿ.ಪಿ.ಕೈಲಾಸಂ ಅವರ ಒತ್ತಾಸೆಯಿಂದ ಇವರು ತೀರಿಕೊಂಡ ಮೇಲೂ ಸುಮಾರು ಎರಡು ವರ್ಷಗಳ ಕಾಲ ನಡೆದು ಕೊನೆಗೆ ನಿಂತುಹೋಯಿತು. ಇವರ ಹೆಸರಿನಲ್ಲಿ ಇವರ ಶಿಷ್ಯರೂ ಅಭಿಮಾನಿಗಳೂ ಬೆಂಗಳೂರಿನಲ್ಲಿ ರಂಗಮಂದಿರವೊಂದನ್ನು ಸ್ಥಾಪಿಸಿದ್ದಾರೆ.	
		
					(ಜಿ.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ